ಸೈಬೀರಿಯ
	ಯುರೋಪಿನ ಯೂರಲ್ ಪರ್ವತದಿಂದ ಪೂರ್ವಕ್ಕೆ, ಏಷ್ಯದಲ್ಲಿ ಪೆಸಿಫಿಕ್ ಸಾಗರ ತೀರದವರೆಗೆ ಹಬ್ಬಿರುವ ಪ್ರದೇಶ. ರಷ್ಯದ ಸೇ.75 ರಷ್ಟು ಪ್ರದೇಶ ಸೈಬೀರಿಯದಲ್ಲಿದೆ. ರಷ್ಯದ ಜನಸಂಖ್ಯೆಯಲ್ಲಿ ಸೇ.20ರಷ್ಟು ಮಾತ್ರ ಇಲ್ಲಿದೆ. ಪೂರ್ವದಲ್ಲಿ ಪೆಸಿಫಿಕ್ ಸಾಗರ ಮತ್ತು ಬೇರಿಂಗ್ ಜಲಸಂಧಿ, ಪಶ್ಚಿಮದಲ್ಲಿ ಯೂರಲ್ ಪರ್ವತ ಶ್ರೇಣಿ, ಉತ್ತರದಲ್ಲಿ ಆರ್ಕಟಿಕ್ ಸಮುದ್ರ, ದಕ್ಷಿಣದಲ್ಲಿ ಚೀನ, ಮಂಗೋಲಿಯ ಮತ್ತು ಕಜಕಿಸ್ತಾನ್ ಇದರ ಮೇರೆಗಳು. ಇದರ ವಿಸ್ತೀರ್ಣ 1,27,66,000 ಚ.ಕಿಮೀ.

ಪ್ರಾಕೃತಿಕ ವಿಭಾಗಗಳು: ಸೈಬೀರಿಯವನ್ನು 4 ಪ್ರಮುಖ ಭೌಗೋಳಿಕ ವಿಭಾಗಗಳಾಗಿ ವಿಂಗಡಿಸಲಾಗಿದೆ.

	1. ಪಶ್ಚಿಮ ಸೈಬೀರಿಯ ಮೈದಾನ : ಯೂರಲ್ ಪರ್ವತಗಳ ಮತ್ತು ಯೆನಿಸೇ ನದಿಗಳ ನಡುವೆ ಹಬ್ಬಿದೆ. ಇಲ್ಲಿ ಓಬ್ ಮತ್ತು ಯೆನಿಸೇ ನದಿಗಳು ಹರಿಯುತ್ತವೆ. ಜೌಗು ಪ್ರದೇಶವಿದೆ.

	2. ಮಧ್ಯ ಸೈಬೀರಿಯನ್ ಪ್ರಸ್ಥಭೂಮಿ : ಯೆನಿಸೇ ಮತ್ತು ಲೀನಾ ನದಿಗಳ ನಡುವಿನ ಪ್ರದೇಶ. ಇಲ್ಲಿನ ಮೈದಾನ ಪ್ರದೇಶವನ್ನು ಲೀನಾ ನದಿ ಪೂರ್ವದ ಉನ್ನತ ಭಾಗಗಳಿಂದ ಪ್ರತ್ಯೇಕಿಸಿದೆ.

	3. ಈಶಾನ್ಯ ಪರ್ವತಗಳು ಮತ್ತು ಪ್ರಸ್ಥಭೂಮಿ : ಲೀನಾ ನದಿಗೆ ಪೂರ್ವದಲ್ಲಿ ಪೆಸಿಫಿಕ್ ಸಾಗರದವರೆಗೆ ಹಬ್ಬಿದೆ. ಇದು ಅನೇಕ ಪರ್ವತ ಶ್ರೇಣಿಗಳಿಂದಲೂ ಕಣಿವೆಗಳಿಂದಲೂ ಕೂಡಿದೆ. ಮಂಗೋಲಿಯದ ಉತ್ತರ ಗಡಿಯಿಂದ ಯಬ್ಲೋನೋವೈ ಮತ್ತು ಸ್ಟಾನ್‍ವಾಯ್ ಪರ್ವತಗಳು ಈಶಾನ್ಯದಲ್ಲಿರುವ ಓಕೋಚಾಸ್ಕ್ ಸಮುದ್ರದವರೆಗೆ ಹಬ್ಬಿವೆ. ಸೈಬೀರಿಯದ ಮಧ್ಯದ ಪ್ರಸ್ಥಭೂಮಿಯಲ್ಲಿ ಸಯಾನ್ ಪರ್ವತಗಳಿವೆ. ಸೈಬೀರಿಯದ ಅತಿ ಎತ್ತರದ ಶಿಖರ ಆಲ್ಟೈನ್ ಪರ್ವತದಲ್ಲಿದೆ. ಇದು ಮಂಗೋಲಿಯ, ಕಜಕಿಸ್ತಾನ್ ಮತ್ತು ಚೀನ ದೇಶಗಳ ನಡುವೆ ಹಬ್ಬಿದೆ. ಪರ್ವತದ ಎತ್ತರ ಸು. 3,000 — 4,000 ಮೀ. ಇಲ್ಲಿನ ಅತಿ ಎತ್ತರದ ಶಿಖರ ಬೆಲುಖ. ಇದು 4,506 ಮೀ ಎತ್ತರವಿದೆ. ಈಶಾನ್ಯದಲ್ಲಿ ಜ್ವಾಲಾಮುಖಿಯ ಶಿಖರಗಳ ಸರಣಿಗಳಿವೆ. ಇವುಗಳಲ್ಲಿ ಕೆಲವು ಜಾಗೃತವಾಗಿವೆ. ಇವು ಮುಖ್ಯವಾಗಿ ಕಾಮ್‍ಚಟ್ಕಾ ಪರ್ಯಾಯ ದ್ವೀಪದಲ್ಲಿ ಕಂಡುಬರುವುವು. ಸೈಬೀರಿಯದ ಅತ್ಯಂತ ಎತ್ತರದ ಶಿಖರ ಇಲ್ಲಿನ ಜ್ವಾಲಾಮುಖಿವಲಯದಲ್ಲಿದೆ. ಇದು ಕ್ಲಿಚೆನ್‍ಸ್ಕಾಯ ಸೋಪ್ಕ. ಇದರ ಎತ್ತರ 4,750 ಮೀ.

	4. ಬೈಕಾಲ್ ಪ್ರದೇಶ : ಇಲ್ಲಿನ ಭೌಗೋಳಿಕ ವಿಭಾಗಗಳಲ್ಲಿ ಅತ್ಯಂತ ಚಿಕ್ಕದು. ಇದು ದಕ್ಷಿಣಮಧ್ಯ ಭಾಗದಲ್ಲಿದೆ.

	ವಾಯುಗುಣ : ಸೈಬೀರಿಯದ ದಕ್ಷಿಣ ಭಾಗವನ್ನು ಹೊರತುಪಡಿಸಿ, ಉಳಿದ ಭಾಗದಲ್ಲಿ ಚಳಿಗಾಲ ವರ್ಷದ ಸು. 7-8 ತಿಂಗಳುಗಳಷ್ಟು ದೀರ್ಘವಾಗಿರುತ್ತದೆ. ಈಶಾನ್ಯದಲ್ಲಿ ಇದು ಇನ್ನೂ ದೀರ್ಘವಾಗಿರುವುದು. ಬೇಸಗೆಯ ಅವಧಿ ಬಲು ಕಡಿಮೆ. ಜನವರಿಯಲ್ಲಿ ಸರಾಸರಿ ಉಷ್ಣಾಂಶ 210 ಸೆ. ಜುಲೈ ತಿಂಗಳ ಸರಾಸರಿ ಉಷ್ಣಾಂಶ 160 ಸೆ. ಮಳೆ ಅತ್ಯಲ್ಪ. ಇದು ಪೆಸಿಫಿಕ್ ಕರಾವಳಿಗೆ ಸೀಮಿತ.

	ಜಲವ್ಯವಸ್ಥೆ : ಏಷ್ಯ ಖಂಡದ ಕೇಂದ್ರಪರ್ವತವಲಯದ ಆಲ್ಟೈ ಮತ್ತು ಸಯಾನ್ ಹಾಗೂ ಸೈಬಿರೀಯದ ಪೂರ್ವದಲ್ಲಿ ಅನೇಕ ನದಿಗಳು ಉಗಮ ಹೊಂದಿ ಆರ್ಕ್‍ಟಿಕ್ ಸಾಗರವನ್ನು ಸೇರುತ್ತವೆ. ಅವುಗಳಲ್ಲಿ ಪ್ರಮುಖವಾದವು: ಓಬಿ  ಪಶ್ಚಿಮ ಸೈಬೀರಿಯದ ಮುಖ್ಯ ನದಿ. ಆಲ್ಟೈನ್ ಪರ್ವತದಲ್ಲಿ ಹುಟ್ಟಿ, ಉತ್ತರದ ಕಡೆಗೆ ಹರಿದು ಖಾರಾ ಸಮುದ್ರದ ಬಳಿ ಓಬಿ ಆಖಾತವನ್ನು ಸೇರುವುದು. ಇದರ ಉದ್ದ 3,680 ಕಿಮೀ. ಇದರ ಮುಖ್ಯ ಉಪನದಿಯಾದ ಇರ್‍ಟಿಷ್ ಸೇರಿಸಿಕೊಂಡಾಗ ಇದರ ಒಟ್ಟು ಉದ್ದ 5,410 ಕಿಮೀ. ಇದರ ಒಟ್ಟು ಜಲಾನಯನ ಪ್ರದೇಶ 29,75,000 ಚ.ಕಿಮೀ. ಕೇವಲ 6 ತಿಂಗಳುಗಳ ಕಾಲ ಮಾತ್ರ ಆಂತರಿಕ ನೌಕಾಯಾನಕ್ಕೆ ಇದು ಅನುಕೂಲವಾಗಿರುತ್ತದೆ. ಯೆನಿಸೇ ನದಿ ಕೇಂದ್ರ ಸೈಬಿರೀಯದ ಸಯಾನ್ ಪರ್ವತಗಳಲ್ಲಿ ಹುಟ್ಟುತ್ತದೆ. ಇದರ ಒಟ್ಟು ಉದ್ದ 4,102 ಕಿಮೀ. ಇದು ಅಂತಿಮವಾಗಿ ಖಾರಾ ಸಮುದ್ರವನ್ನು ಸೇರುವುದು. ಇದರ ಒಟ್ಟು ಜಲಾನಯನ ಪ್ರದೇಶ 26 ಲಕ್ಷ ಚ.ಕಿಮೀ. ವರ್ಷದಲ್ಲಿ ಸು. 5 ತಿಂಗಳ ಕಾಲ 2,900 ಕಿಮೀ ದೂರ ನೌಕಾಯಾನಕ್ಕೆ ಅನುಕೂಲವಾಗಿರುತ್ತದೆ. ಇದರ ಪ್ರಮುಖ ಉಪನದಿಗಳೆಂದರೆ ಅಂಗಾರ, ತುವಾ, ತುಂಗುಸ್ಕಾ. ಲೀನಾ: ಈ ನದಿ ಬೈಕಾಲ್ ಸರೋವರದ ಪಶ್ಚಿಮದಲ್ಲಿ ಉಗಮ ಹೊಂದಿ, 4,400 ಕಿಮೀ ಹರಿದು, ಲಾಪ್ಟೇವ್ ಸಮುದ್ರ ಸೇರುವುದು. ಇದರ ಒಟ್ಟು ಜಲಾನಯನ ಪ್ರದೇಶ 2.6 ದಶಲಕ್ಷ ಚ.ಕಿಮೀ. ಇದರಲ್ಲಿ ಸು. 3,380 ಕಿಮೀ ಉದ್ದ ನೌಕಾಯಾನಕ್ಕೆ ಅನುಕೂಲ. ಈ ನದಿ ದಂಡೆ ಮೇಲಿರುವ ಪ್ರಮುಖ ನಗರ ಯಾಕುಟಸ್ಕ್.  ಶಿಲ್ಕಾ ಮತ್ತು ಆರ್ಗುನ್ ನದಿಗಳ ಸಂಗಮದಿಂದ ಮುಂದೆ ಹರಿಯುವ ಅಮುರ್ ನದಿಯ ಒಟ್ಟು ಉದ್ದ 4,345 ಕಿಮೀ. ರಷ್ಯ ಮತ್ತು ಚೀನಗಳ ಗಡಿಯಾಗಿ ಸು. 1,610 ಕಿಮೀ ಹರಿಯುತ್ತದೆ. 6 ತಿಂಗಳುಗಳ ಕಾಲ ನೌಕಾಯಾನಕ್ಕೆ ಅನುಕೂಲ. ಜಿಯಾ, ಉಸುರಿ ಇದರ ಪ್ರಮುಖ ಉಪನದಿಗಳು. ಸೈಬೀರಿಯದ ದಕ್ಷಿಣದಲ್ಲಿರುವ ಬೈಕಾಲ್ ಸರೋವರ ಪ್ರಪಂಚದ ಅತ್ಯಂತ ಆಳವಾದ ಸಿಹಿನೀರಿನ ಸರೋವರ (ಸು. 1,637 ಮೀ).

	ಸಸ್ಯವರ್ಗ : ಆರ್ಕಟಿಕ್ ಸಾಗರದಿಂದ ದಕ್ಷಿಣಕ್ಕೆ ಬಂದಂತೆ ತಂಡ್ರಾ ಮಾದರಿಯ ಸಸ್ಯವರ್ಗ ಕಂಡುಬರುವುದು. ಹಾವಸೆ ಮತ್ತು ಕಲ್ಲುಹೂ ವ್ಯಾಪಕವಾಗಿದೆ. ಇದರ ದಕ್ಷಿಣದಲ್ಲಿ ಟೈಗಾ ಮಾದರಿ ಸಸ್ಯವರ್ಗವಿದೆ. ಲಾರ್ಚ್, ಪೈನ್, ಸಿಡರ್ ಮತ್ತು ಫರ್ ಮರಗಳು ಹೆಚ್ಚಾಗಿವೆ. ಇನ್ನೂ ದಕ್ಷಿಣಕ್ಕೆ ಎಲೆ ಉದುರುವ ಸಸ್ಯವರ್ಗವೂ ನೈಋತ್ಯದಲ್ಲಿ ಸ್ಟೇಫೀ ಹುಲ್ಲುಗಾವಲೂ ಇವೆ.

	ಪ್ರಾಣಿವರ್ಗ: ಇಲ್ಲಿಯ ಪ್ರಾಣಿ ಸಂಪತ್ತು ಸಮೃದ್ಧವಾದದ್ದು. ತೋಳ, ನರಿ, ಹಿಮಸಾರಂಗ, ಸೀಲ್, ವಾಲ್‍ರಸ್‍ಗಳೂ ಬೈಕಾಲ್ ಸರೋವರದಲ್ಲಿ ಸೀಲ್‍ಗಳೂ ಇವೆ.

	ಸಂಪನ್ಮೂಲಗಳು : ಪೆಟ್ರೋಲಿಯಮ್ ಮತ್ತು ಸ್ವಾಭಾವಿಕ ಅನಿಲ ಇಲ್ಲಿನ ಪ್ರಮುಖ ಸಂಪನ್ಮೂಲಗಳು. ಕಬ್ಬಿಣ ಅದುರು, ಚಿನ್ನ ಮತ್ತು ತಾಮ್ರ ಇತರ ಖನಿಜಗಳು. ಕುಜ್‍ನೆಟ್‍ಸ್ಕ್ ಪ್ರದೇಶದಲ್ಲಿ ಕಲ್ಲಿದ್ದಲು, ಪೂರ್ವ ಮತ್ತು ಪಶ್ಚಿಮ ಸೈಬೀರಿಯ ಪ್ರದೇಶದಲ್ಲಿ ಪೆಟ್ರೋಲಿಯಂ ಹಾಗೂ ಸ್ವಾಭಾವಿಕ ಅನಿಲ ನಿಕ್ಷೇಪಗಳಿವೆ. ಕೊಳವೆ ಮಾರ್ಗಗಳ ಮೂಲಕ ಅನಿಲವನ್ನು ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ ಇಲ್ಲಿ ಯುರೇನಿಯಂ, ನಿಕ್ಕಲ್, ಮ್ಯಾಂಗನೀಸ್, ವಜ್ರ ಮತ್ತು ಕೋಬಾಲ್ಟ್ ಕೂಡ ದೊರಕುತ್ತವೆ.

	ಆರ್ಥಿಕತೆ :  ಈ ಪ್ರದೇಶ ರಷ್ಯದ ಆಡಳಿತಕ್ಕೆ ಒಳಪಟ್ಟ ಮೇಲೆ ಇಲ್ಲಿನ ಸಂಪನ್ಮೂಲಗಳು ಹೆಚ್ಚಾಗಿ ಬಳಕೆಗೆ ಒಳಪಟ್ಟಿವೆ. ಪಂಚವಾರ್ಷಿಕ ಯೋಜನೆಗಳಿಂದ ದೇಶೀ ಮತ್ತು ವಿದೇಶೀ ಗಣಿಗಾರಿಕೆಗೆ ಪ್ರೋತ್ಸಾಹ ಉಂಟಾಯಿತು. ದಕ್ಷಿಣ ಕೊರಿಯ ಮತ್ತು ಜಪಾನ್ ಇಲ್ಲಿ ಅನೇಕ ಗಣಿಗಳನ್ನು ನಿರ್ವಹಿಸುತ್ತಿವೆ.

	ಕೈಗಾರಿಕೆ :  ಲೋಹ, ಬಟ್ಟೆ, ವಾಹನ, ಕೃಷಿ ಉಪಕರಣ, ಕಟ್ಟಡ ಸಾಮಗ್ರಿ ಕೈಗಾರಿಕೆಗಳಿವೆ. ಕುಜ್‍ನೆಟ್‍ಸ್ಕ್, ಎನಿಸಿ ನದಿ ಕಣಿವೆ ಪ್ರದೇಶ, ಲೀನಾ ನದಿ ಪ್ರದೇಶ, ಯಾಕುಟಸ್ಕ್ ಮತ್ತು ನೋರಿಲಾಸ್ಕ್ ಇವು ಇಲ್ಲಿನ ಪ್ರಮುಖ ಕೈಗಾರಿಕಾ ಪ್ರದೇಶಗಳು. ಪಶ್ಚಿಮ ಸೈಬೀರಿಯದಲ್ಲಿ ಗೋದಿ, ರೈ, ಓಟ್, ಬಾರ್ಲಿ ಮತ್ತು ಸೂರ್ಯಕಾಂತಿ ಬೆಳೆಯಲಾಗುತ್ತಿದೆ. ಹೈನುಗಾರಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಪೂರ್ವಪ್ರದೇಶದಲ್ಲಿ ಆಲೂಗೆಡ್ಡೆ ಹಾಗೂ ಇತರ ಸಿಹಿಗೆಡ್ಡೆಗಳನ್ನು ಬೆಳೆಯಲಾಗುತ್ತದೆ. ದೂರದ ಪೂರ್ವ ಪ್ರಾಂತ್ಯದಲ್ಲಿ ಹಿಮಸಾರಂಗಗಳ ಸಾಕಣೆ ಇದೆ. ಮಾಂಸ, ಹಾಲು ಮತ್ತು ಚರ್ಮದ ಉತ್ಪನ್ನವಿದೆ. ಅಲ್ಲದೆ ಅರಣ್ಯಗಾರಿಕೆ ಮತ್ತು ಮೀನುಗಾರಿಕೆಯೂ ಇಲ್ಲಿ ಅಭಿವೃದ್ಧಿ ಹೊಂದಿದೆ.

	ಸಾರಿಗೆ :  ಇಲ್ಲಿನ ಆರ್ಥಿಕಾಭಿವೃದ್ಧಿಯ ಬೆನ್ನೆಲುಬು ಟ್ರಾನ್ಸ್ ಸೈಬೀರಿಯನ್ ರೈಲ್ವೆ. 1904ರಲ್ಲಿ ಪೂರ್ಣಗೊಂಡ ಇದು ಪ್ರಪಂಚದ ಅತ್ಯಂತ ಉದ್ದವಾದ ಖಂಡಾಂತರ ರೈಲು ಮಾರ್ಗ. ಇದು ಯುರೋಪ್ ಮತ್ತು ಏಷ್ಯ ಖಂಡಗಳನ್ನು ಒಟ್ಟುಗೂಡಿಸಿದೆ. ಇದು ಮಾಸ್ಕೋವನ್ನು ಪೆಸಿಫಿಕ್ ತೀರದ, ವ್ಲಾಡಿವೋಸ್ಟಾಕ್‍ನೊಂದಿಗೆ ಕೂಡಿಸುತ್ತದೆ. ಇದರ ಉದ್ದ 9,232 ಕಿಮೀ. ಇದು ರಷ್ಯದ ಕೊನೆಯ ದೊರೆ ಜಾರ್ ನಿಕೋಲಸ್‍ನಿಂದ ಆರಂಭಗೊಂಡಿತ್ತು. ಇದಕ್ಕೆ ಪೂರಕವಾಗುವಂತೆ ತುರ್ಕಿಸ್ತಾನ್-ಸೈಬೀರಿಯನ್ ಮಾರ್ಗ, ದಕ್ಷಿಣ ಸೈಬೀರಿಯನ್ ಮಾರ್ಗ, ಕೇಂದ್ರ ಸೈಬೀರಿಯನ್ ರೈಲು ಮಾರ್ಗ ಮತ್ತು ಬೈಕಾಲ್-ಅಮುರ್ ಮಾರ್ಗಗಳು ಪ್ರಮುಖವಾಗಿವೆ. ಇತ್ತೀಚಿನ ವರ್ಷಗಳಲ್ಲಿ ವಾಯು ಸಾರಿಗೆ ಹೆಚ್ಚು ಅಭಿವೃದ್ಧಿ ಹೊಂದುತ್ತಿದೆ. ಟೈಮನ್, ನೋವಾಸಿಬಿರಿಸ್ಕ್, ಇರ್‍ಕುಚ್‍ಸ್ಕ್ ಮತ್ತು ಖಾಬರ್‍ವೋಸ್ಕ್ ಪ್ರಮುಖ ವಿಮಾನ ನಿಲ್ದಾಣಗಳು.

	ಭಾಷೆ : ಇಲ್ಲಿ ರಷ್ಯನ್ ಭಾಷೆ ಹೆಚ್ಚಾಗಿ ಬಳಕೆಯಲ್ಲಿದೆ. ಅಲ್ಲದೆ ಪೇಲಿಯೋ ಏಷ್ಯಾಟಿಕ್, ಯುರಾಲಿಕ್, ಆಲ್‍ಟೆಕ್ ಮತ್ತು ಇಂಡೋಯುರೋಪಿಯನ್ ಗುಂಪಿಗೆ ಸೇರಿದ ಭಾಷೆಗಳ ಬಳಕೆ ಇದೆ.

	ಮಾನವ ಸಂಪನ್ಮೂಲ : 31 ಮಿಲಿಯ ಜನಸಂಖ್ಯೆ ಹೊಂದಿರುವ ಈ ಪ್ರದೇಶದ ಸರಾಸರಿ ಜನಸಾಂದ್ರತೆ ಪ್ರತಿ 11/2 ಚ.ಕಿಮೀ ಗೆ ಕೇವಲ 6. ಚೆಲ್ಯಬಿನ್‍ಸ್ಕ್, ನೋವಾಸಿಬಿರಿಸ್ಕ್, ನೋವೋಕುಜ್‍ನೆಟ್‍ಸ್ಕ್, ಇರ್‍ಕುಚ್‍ಸ್ಕ್ ಮತ್ತು ವ್ಲಾಡಿ ವಾಸ್ಟ್‍ಕ್ ಮುಖ್ಯ ನಗರಗಳು.

	ಇಲ್ಲಿ ಹೆಚ್ಚಿನ ಜನ ರಷ್ಯನ್ನರು. ಕಜಕಿಸ್ತಾನದಲ್ಲಿ ಕeóïಕ್ಸ್, ಬೈಕಾಲ್ ಸರೋವರದ ಸಮೀಪದಲ್ಲಿ ಬ್ಯುರ್ಯಟ್ಸ್, ಲೀನಾ ನದಿ ಭಾಗದಲ್ಲಿ ಯಾಕುಟ್ಸ್, ಉತ್ತರ ಸೈಬೀರಿಯದಲ್ಲಿ ಟುಂಗಸ್, ಚುಕ್‍ಜಿ ಮತ್ತು ಕೋರಯಾಕ್ಸ್ ಜನರಿದ್ದಾರೆ.

	ಐತಿಹಾಸಿಕ ಹಿನ್ನೆಲೆ : ಸೈಬೀರಿಯಕ್ಕೆ ಮೊದಲು ಯುರೋಪಿನಿಂದಲೂ ಮಧ್ಯ ಮತ್ತು ಪೂರ್ವ ಏಷ್ಯ ಪ್ರದೇಶದಿಂದಲೂ ಜನ ವಲಸೆ ಬಂದಿರಬಹುದು. ದಕ್ಷಿಣ ಸೈಬೀರಿಯದಲ್ಲಿರುವ ಪೂರ್ವಶಿಲಾಯುಗದ ಕುರುಹುಗಳು ತಿಳಿಸುವಂತೆ ಕಂಚಿನ ಯುಗದಲ್ಲಿ (ಕ್ರಿ.ಪೂ.1000) ಇದು ಚೀನದ ಪ್ರಭಾವಕ್ಕೆ ಒಳಪಟ್ಟಿತ್ತು. ಅನಂತರ ಟಾರ್ಟರ್ ಹಾಗೂ ಮಂಗೋಲಿಯನ್ನರ ಆಡಳಿತಕ್ಕೆ ಒಳಪಟ್ಟಿತ್ತು. 15ನೆಯ ಶತಮಾನದವರೆಗೆ ದಕ್ಷಿಣ ಸೈಬೀರಿಯ ಮಂಗೋಲಿಯನ್ನರ ಅಧೀನದಲ್ಲಿತ್ತು. 16ನೆಯ ಶತಮಾನದಲ್ಲಿ ರಷ್ಯದ ಆಡಳಿತಕ್ಕೆ ಒಳಪಟ್ಟಿತು. ಇಲ್ಲಿ ಹಲವು ಅಲೆಮಾರಿ ಸಮೂಹಗಳಿದ್ದುವು. ರಷ್ಯದ eóÁರ್ ಚಕ್ರವರ್ತಿ ಇವಾನ್ Iಗಿ ಇದರ ಬಹುಭಾಗವನ್ನು ವಶಪಡಿಸಿಕೊಂಡ. 16 ಮತ್ತು 17ನೆಯ ಶತಮಾನಗಳಲ್ಲಿ ರಷ್ಯದ ತುಪ್ಪಟ ವ್ಯಾಪಾರಿಗಳು ಸೈಬೀರಿಯದ ವಿಶಾಲ ಪ್ರದೇಶದಲ್ಲಿ ಸಂಚರಿಸಿ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಕೋಟೆಗಳನ್ನು ಕಟ್ಟಿದರು. ಅವುಗಳಲ್ಲಿ ಪ್ರಮುಖವಾದವು ತೈಯುಮೆನ್ (1585), ಟಾಂಸ್ಕ್ (1604), ಕ್ರಾಸ್‍ನೋರ್ಯಾಸ್ಕ್ (1628) ಮತ್ತು ಇರ್‍ಕುಚ್‍ಸ್ಕ್ (1652). 17 ಮತ್ತು 18ನೆಯ ಶತಮಾನಗಳಲ್ಲಿ ಸೈಬೀರಿಯ ರಷ್ಯನ್ ಆಳಿಕೆಗೆ ಒಳಪಟ್ಟಿತು. ಅಮೂರ್ ನದಿ ಕಣಿವೆ ಪ್ರದೇಶಕ್ಕೆ ಇವರ ಪ್ರವೇಶವನ್ನು ಚೀನೀಯರು ನರ್ಚಿನ್‍ಸ್ಕ್ ಒಪ್ಪಂದದ (1689) ಮೂಲಕ ತಡೆದರು. ಉಸ್ಸುರಿ ನದಿಯ ದ್ವೀಪಗಳ ಒಡೆತನದ ಬಗ್ಗೆ ರಷ್ಯ ಮತ್ತು ಚೀನ ನಡುವೆ ವಿವಾದವಿತ್ತು. ಇದು ರಷ್ಯಕ್ಕೆ ಸೇರಿದ ಮೇಲೆ ಇದರ ಆಡಳಿತವನ್ನು ನೋಡಿಕೊಳ್ಳಲು ಸೇಂಟ್‍ಪೀಟರ್ಸ್‍ಬರ್ಗ್‍ನಲ್ಲಿ ಕೇಂದ್ರ ಕಚೇರಿಯೊಂದನ್ನು ಸ್ಥಾಪಿಸಲಾಯಿತು. ಟ್ರಾನ್ಸ್-ಸೈಬೀರಿಯನ್ ರೈಲ್ವೆ ನಿರ್ಮಾಣವಾದ ಮೇಲೆ (1892-1905) ಪೂರ್ವದ ಕಡೆಗೆ ಜನರ ವಲಸೆ ಹೆಚ್ಚಾಯಿತು. ರಷ್ಯದ ಕ್ರಾಂತಿ ಹಾಗೂ ಒಂದನೆಯ ಮಹಾಯುದ್ಧದ ಸಂದರ್ಭದಲ್ಲಿ ಇದು ಜರ್ಮನರ ವಶವಾಗುವುದನ್ನು ತಪ್ಪಿಸಲಾಯಿತು. ರಷ್ಯದ ಕ್ರಾಂತಿಯ ಅನಂತರ ಇಲ್ಲಿ ಆರ್ಥಿಕಾಭಿವೃದ್ಧಿಗೆ ಹೆಚ್ಚು ಮಹತ್ತ್ವ ನೀಡಲಾಯಿತು. ಮೊದಲನೆಯ ಪಂಚವಾರ್ಷಿಕ ಯೋಜನೆಯಲ್ಲಿ (1928-33) ಕುeóïನೆಟ್‍ಸ್ಕ್ ಭಾಗದ ಕಲ್ಲಿದ್ದಲು ಮತ್ತು ಕಬ್ಬಿಣದ ಅದುರಿನ ಗಣಿಗಳನ್ನು ಅಭಿವೃದ್ಧಿಪಡಿಸಿ, ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಗಳನ್ನು ಸ್ಥಾಪಿಸಲಾಯಿತು. ಪಶ್ಚಿಮ ಸೈಬೀರಿಯದಲ್ಲಿ ಕೃಷಿಯನ್ನು ಅಭಿವೃದ್ಧಿಪಡಿಸಲಾಯಿತು. ಇದರಿಂದ 1914-46 ರವರೆಗೆ ಇಲ್ಲಿನ ಜನಸಂಖ್ಯೆ ದ್ವಿಗುಣಗೊಂಡಿತು. ಈ ಪ್ರದೇಶದಲ್ಲಿ ರಾಜಕೀಯ ಖೈದಿಗಳ ಶಿಬಿರಗಳನ್ನು ಸ್ಥಾಪಿಸಲಾಗಿತ್ತು. ಗೋರ್ಬಚೆವ್ ಅಧ್ಯಕ್ಷರಾಗಿದ್ದ ಕಾಲದಲ್ಲಿ ಅನೇಕ ಖೈದಿಗಳ ಬಿಡುಗಡೆಯಾಯಿತು.	       
                 (ಎಸ್.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ